ಗಾಸ್ರ್ಟಾಂಗ್, ಜಾನ್
1876-1956. ಬ್ರಿಟಿಷ್ ಪುರಾತತ್ವಜ್ಞ. ಮಧ್ಯಪ್ರಾಚ್ಯದ ಬಗ್ಗೆ ಈತ ನಡೆಸಿದ ಸಂಶೋಧನೆಗಳಿಂದಾಗಿ ಪ್ರಖ್ಯಾತನಾಗಿದ್ದಾನೆ. ಜನನ ಲ್ಯಾಂಡ್‍ಷೈರಿನ್ ಬ್ಲಾಕ್‍ಬರ್ನ್‍ನಲ್ಲಿ. 1876ರ ಮೇ 5 ರಂದು. ಆಕ್ಸ್‍ಫರ್ಡಿನ ಜೀಸಸ್ ಕಾಲೇಜಿನಲ್ಲಿ ಗಣಿತಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗ ಈತನಿಗೆ ರೋಮ್ ಮತ್ತು ಬ್ರಿಟಿಷ್ ಪ್ರಾಕ್ತನದಲ್ಲಿ ಆಸಕ್ತಿ ಹುಟ್ಟಿತು. ಈತ ಪ್ರಕಟಿಸಿದ ರೋಮನ್ ರಿಬ್‍ಚೆಸ್ಟರ್ (1899) ಈ ಆಸಕ್ತಿಯ ಫಲ. 1902ರಲ್ಲಿ ಈತ ಲಿವರಪೂಲ್ ವಿಶ್ವವಿದ್ಯಾಲಯದಲ್ಲಿ ಈಜಿಪ್ಟ್ ಪ್ರಾಕ್ತನಶಾಸ್ತ್ರದ ಉಪಪ್ರಾಧ್ಯಾಪಕನಾಗಿದ್ದ. ಅದೇ ವಿಶ್ವವಿದ್ಯಾಲಯದಲ್ಲಿ 1907ರಿಂದ 1941ರ ವರೆಗೆ ಪ್ರಾಕ್ತನಶಾಸ್ತ್ರ ವಿಧಾನಗಳ ಮತ್ತು ಪ್ರಯೋಗದ ಪ್ರಾಧ್ಯಾಪಕನಾಗಿದ್ದ. ಲಿವರ್‍ಫೂಲ್ ಪ್ರಾಕ್ತನಶಾಸ್ತ್ರ ಸಂಸ್ಥೆಯ ಸ್ಥಾಪನೆಗೆ ಈತ ಕಾರಣ. 1899ರಲ್ಲಿ ಈತ ವಿಲಿಯಂ ಮ್ಯಾಥ್ಯೂಸ್ ಫ್ಲಿಂಡರ್ ಪೆಟ್ರಿಯ ಕೆಳಗೆ ಕೆಲಸ ಮಾಡಲು ಈಜಿಪ್ಟಿಗೆ ಹೋದ. ಮುಂದಿನ 15 ವರ್ಷಗಳ ಕಾಲ ಈಜಿಪ್ಟ್, ನ್ಯೂಬಿಯ, ಏಷ್ಯ ಮೈನರ್‍ಗಳಲ್ಲಿ ಉತ್ಖನನ ಮಾಡಿದ. ಹಿಟ್ಟೈಟ್ ನಾಗರಿಕತೆಯ ವಿಚಾರದಲ್ಲಿ ಅಧಿಕಾರಯುತವಾಗಿ ಹೇಳಬಲ್ಲವನಾದ. 1910ರಲ್ಲಿ ಪ್ರಕಟವಾದ ದಿ ಲ್ಯಾಂಡ್ ಆಫ್ ದಿ ಹಿಟ್ಟೈಟೀಸ್ ಎಂಬುದು ಈ ಬಗ್ಗೆ ಒಂದು ಶಿಷ್ಟ ಗ್ರಂಥ. ಇದನ್ನು ಈತ ಪರಿಷ್ಕರಿಸಿ 1927ರಲ್ಲಿ ದಿ ಹಿಟ್ಟೈಟ್ ಎಂಪೈರ್ ಎಂಬ ಹೆಸರಿನಲ್ಲಿ ಪ್ರಕಟಿಸಿದ. ಪ್ರಾಚೀನ ಇಥಿಯೋಪಿಯದ ರಾಜಧಾನಿ ಮೆರೊಯೀದಲ್ಲಿ ಈತ ನಡೆಸಿದ (1910-14) ಉತ್ಖನನಗಳು ಅತ್ಯಂತ ಗಮನಾರ್ಹ ವಿಚಾರಗಳನ್ನು ಹೊರಗೆಡವಿದವು. ಅದು ರೋಮನ್ನರ ಆಕ್ರಮಣಕ್ಕೊಳಪಟ್ಟಿತ್ತೆಂಬುದು ವ್ಯಕ್ತಪಟ್ಟದ್ದು ಆಗಲೇ.

	ಒಂದನೆಯ ಮಹಾಯುದ್ಧದ ಕಾಲದಲ್ಲಿ ಈತ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ. ಈತ ಜೆರೂಸಲೆಂನಲ್ಲಿ ಬ್ರಿಟಿಷ್ ಪುರಾತತ್ತ್ವ ಶಾಲೆಯ ಪ್ರಥಮ ನಿರ್ದೇಶಕನಾಗಿ ನೇಮಕಗೊಂಡದ್ದು 1919ರಲ್ಲಿ. ಪ್ಯಾಲೆಸ್ಟೇನಿನ ಪುರಾತತ್ತ್ವ ಇಲಾಖೆಯನ್ನು ಈತ ವಹಿಸಿಕೊಂಡದ್ದು 1920ರಲ್ಲಿ. 1926ರಲ್ಲಿ ಈ ಎರಡು ಹುದ್ದೆಗಳಿಂದ ನಿವೃತ್ತಿ ಹೊಂದಿದ ಮೇಲೆಯೂ ಪುರಾತತ್ತ್ವ ವಿಚಾರಗಳಲ್ಲಿ ಕೆಲಸ ಮುಂದುವರಿಸಿದ. 1930-36ರಲ್ಲಿ ಜೆರಿಕೋದಲ್ಲಿ ಈತ ಮಾಡಿದ ಉತ್ಖನನಗಳು ಬಲು ಅಮೂಲ್ಯವಾದಂಥವು. ನೂತನ ಶಿಲಾಯುಗ ಮತ್ತು ಕಂಚಿನ ಯುಗಗಳ ಜನವಸತಿಯ ಬಗ್ಗೆ ಅನೇಕ ಮುಖ್ಯ ಸಂಗತಿಗಳು ಆವಿಷ್ಕಾರಗೊಂಡುವು.

	ಈತ ಮೆರ್ಸಿನ್‍ನಲ್ಲಿ ಸಂಶೋಧನೆಗೆ ಎರಡನೆಯ ಮಹಾಯುದ್ಧ ಅಡ್ಡಿಯಾಯಿತು. ಈ ಸಂಶೋಧನೆಯ ವರದಿ ಪ್ರಿ - ಹಿಸ್ಟಾರಿಕ್ ಮೆರ್ಸಿನ್ ಎಂಬ ಹೆಸರಿನಲ್ಲಿ ಪ್ರಕಟವಾದ್ದು 1953ರಲ್ಲಿ. ಆನಟೋಲಿಯದ ಬಗ್ಗೆ ನಡೆಸಿದ ಅಧ್ಯಯನಕ್ಕೆ ಮನ್ನಣೆಯಾಗಿ ಈತ 1947-48ರಲ್ಲಿ ಆಂಕಾರದ ಬ್ರಿಟಿಷ್ ಪುರಾತತ್ತ್ವ ಶಾಲೆಯ ಪ್ರಥಮ ನಿರ್ದೇಶಕನಾಗಿ ನೇಮಕಗೊಂಡ. 1949ರಲ್ಲಿ ಅದರ ಅಧ್ಯಕ್ಷನಾದ. ಈತ ಲೆಬನನಿನ ಬೀರತ್‍ನಲ್ಲಿ 1956ರ ಸಪ್ಟೆಂಬರ್ 12ರಂದು ತೀರಿಕೊಂಡ.				*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ